ಪೆನಿಸಿಲಿನ್ -
ಪೆನಿಸಿಲಿಯಮ್ ಜಾತಿಯ ಕೆಲವು ಬೂಜುಗಳು ತಮ್ಮ ಬೆಳವಣಿಗೆ ಕಾಲದಲ್ಲಿ ತಯಾರಿಸಿ ಹೊರಹಾಕುವ ರಾಸಾಯನಿಕ. ಇದು ಅನೇಕ ಏಕಾಣು ಜೀವಿಗಳಿಗೆ ಪ್ರಬಲ ವಿರೋಧಕವಾದ ವಸ್ತು. ಜೀವಂತ ಜೀವಾಣುಗಳು ಇತರ ಜೀವಾಣುಗಳ ವಿರೋಧವಾಗಿ ವಿಶಿಷ್ಟ ಪರಿಣಾಮಕಾರಿಯಾಗುವಂತೆ ತಯಾರಿಸುವ ವಸ್ತುಗಳೆಂದು ಪತ್ತೆಯಾದ ಹಲವು ಜೀವ ವಿರೋಧಕಗಳ ಪೈಕಿ ಇದೇ ಮೊದಲನೆಯದು. ಪೆನಿಸಿಲಿನ್ ಅಂದರೆ ಒಂದೇ ಪದಾರ್ಥವೆಂಬ ಭಾವನೆ ಇತ್ತು. ರಾಸಾಯನಿಕವಾಗಿ ಸ್ವಲ್ಪ ಬದಲಾವಣೆಗಳಿರುವ ಕೊನೆಯ ಪಕ್ಷ (ಎಫ್.ಜಿ.ಕೆ.ಎಕ್ಸ್). ನಾಲ್ಕು ಬಗೆಯ ಪೆನಿಸಿಲಿನ್ನುಗಳಾದರೂ ಇವೇ ಎಂದು ಈಗ ತಿಳಿದಿದೆ.

ಪೆನಿಸಿಲಿನ್ನನ್ನು ಮೊದಲು ಆವಿಷ್ಕರಿಸಿದವ ಸರ್ ಅಲೆಗ್ಸಾಂಡರ್ ಫ್ಲೆಮಿಂಗ್ (1881-1955). ಅಣುಜೀವಿಗಳನ್ನು ಪ್ರಯೋಗಾಲಯದಲ್ಲಿ ಕೃತಕವಾಗಿ ಬೆಳೆಸುವ ಕೃಷಿಕೆ ತಟ್ಟೆಗಳಲ್ಲಿ ಪೆನಿಸಿಲಿಯಮ್ ನೊಟೆಟಮ್ಮಿನ ಬೀಜಕಣಗಳು ಅಕಸ್ಮಾತ್ ಸೇರಿ, ಬೆಳೆಯಲು ಉದ್ದೇಶಿಸಿದ ಅಣುಜೀವಿಗಳನ್ನೇ ನಾಶಮಾಡಿದ್ದರಿಂದ ಈ ಬೂಜಿನ ಸ್ವಭಾವ ಮೊದಲು ಗೊತ್ತಾಯಿತು. ಈ ಬೀಜಕಣಗಳ ಸುತ್ತಲೂ ಇದ್ದ ಗುತ್ತಿ ಕಾಯಾಣುಜೀವಿಗಳು (ಸ್ಟ್ಯಾಫಿಲೊಕಾಕೈ) ಕರಗಿ ಹೋಗಿದ್ದವು. ಬೂಜನ್ನು ಚೊಕ್ಕವಾಗಿ ಬೇರೆ ತೆಗೆದು ಪರೀಕ್ಷಿಸಿದಾಗ, ಮಾನವನ ರೋಗಕಾರಕ ಅಣುಜೀವಿಗಳನೇಕವು ಇದು ಹೊರಸುರಿಸಿದ ವಸ್ತುವಿನಿಂದ ನಾಶವಾಗುವುದು ತಿಳಿಯಿತು. ಫ್ಲೆಮಿಂಗ್ ಈ ವಸ್ತುವಿಗೆ ಪೆನಿಸಿಲಿನ್ ಎಂದು ಹೆಸರಿಟ್ಟ. ಬೂಜು ಬೆಳೆದ ದ್ರವದೊಳಕ್ಕೆ ಪೆನಿಸಿಲಿನ್ ಬಂದು ಸೇರುವುದೇ ಪೆನಿಸಿಲಿನ್ ತಯಾರಿಕೆಯ ಮೂಲ. ರೋಗಾಣುಗಳಿಗೆ ಪೆನಿಸಿಲಿನ್ ನಾಶಕವಾಗಿದ್ದರೂ ಮಾನವನಿಗೆ ಅಪಾಯಕಾರಿಯಾಗಿ ಕಾಣದುದು ಅತ್ಯಂತ ಸೋಜಿಗ. ಅಂದಿನ ತನಕ ಬಳಕೆಯಲ್ಲಿದ್ದ ನಂಜುರೋಧಗಳೆಲ್ಲ ಮಾನವನಿಗೂ ವಿಷಕಾರಕಗಳಾಗಿದ್ದವು. 

ಫ್ಲೆಮಿಂಗ್ ಪೆನಿಸಿಲಿನ್ನನ್ನು ಆವಿಷ್ಕರಿಸಿದ್ದು ಆಕ್ಸ್‍ಫರ್ಡಿನ ಪ್ರಯೋಗಾಲಯದಲ್ಲಿ, ಅಲ್ಲಿಯ ಸರ್ ಹೊವಾರ್ಡ್ ಫ್ಲೋರೆ ಮತ್ತು ಚೆಯ್ನ್ ಪೆನಿಸಿಲಿನ್ನನ್ನು ಸಾಂದ್ರೀಕರಿಸಿ ಚೊಕ್ಕಪಡಿಸುವುದರಲ್ಲಿ (1939) ಯಶಸ್ವಿಯಾದರು. ಇದರ ಒಳ್ಳೆಯ ಪ್ರಭಾವವನ್ನು ಮೊದಲು ಚಿಟ್ಟಿಲಿಗಳ (ಮೈಸ್) ಮೇಲೂ ಅನಂತರ ರೋಗಿಗಳ ಮೇಲೂ ಸಾಧಿಸಿ ತೋರಿಸಲಾಯಿತು. ಇದರ ತಯಾರಿಕೆ ಸುಲಭವಾಗಿರಲಿಲ್ಲ. ಸಾಮಾನ್ಯ ಕಾವಿನಲ್ಲಿ ಇದು ನಾಶವಾಗುತ್ತಿತ್ತು. ಇದರ ತಯಾರಿಕೆಯ ವಿಧಾನವನ್ನು ಉಪಜ್ಞಿಸಿ 1941 ರಲ್ಲಿ ಫ್ಲೋರೆ ಆ ಉಪಜ್ಞೆಯನ್ನು ಅಮೆರಿಕಕ್ಕೆ ತೆಗೆದುಕೊಂಡು ಹೋಗಿ ಪೆನಿಸಿಲಿನ್ನನ್ನು ತಯಾರಿಸುವಂತೆ ಅಮೆರಿಕನ್ನರನ್ನು ಪುಸಲಾಯಿಸಿದ. ಬೂಜನ್ನು ಸೀಸೆಗಳಲ್ಲಿ ಮೇಲಿಂದ ಮೇಲೆ ಬೆಳೆಸುವುದರ ಬದಲಾಗಿ, ದೊಡ್ಡ ಕಡಾಯಿಗಳಲ್ಲಿ ಜೋಳದ ಹಿಟ್ಟಿನ ಗಂಜಿಯಾಳದಲ್ಲಿ ಸಾಂದ್ರೀಕರಿಸುವ ಇನ್ನೂ ಉತ್ತಮ ವಿಧಾನಗಳನ್ನು ಪೆನಿಸಿಲಿನ್ನನ್ನು ಇನ್ನೂ ಚೆನ್ನಾಗಿ ಸುರಿಸಿಬಿಡುವ ಇತರ ಜಾತಿ ಬೂಜುಗಳನ್ನೂ ಕಂಡುಕೊಂಡರು. ಪೆನಿಸಿಲಿನ್ನಿನ ರಾಸಾಯನಿಕ ರಚನೆ, ಕೃತಕ ತಯಾರಿಕೆ ಗೊತ್ತಿದ್ದರೂ ಅವು ಈ ವಿಧಾನಗಳಿಗಿಂತ ಅಗ್ಗವಲ್ಲ.

ಪೆನಿಸಿಲಿನ್ ಪ್ರಭಾವ ವಿಶಿಷ್ಠ. ಮೊದಲು ಕಂಡುಹಿಡಿದ ಕಚ್ಚಾ ಪೆನಿಸಿಲಿನ್ 800 ರಷ್ಟು ಸಾರಗುಂದಿಸಿದಾಗಲೂ ಏಕಾಣುಜೀವಿ ಬೆಳವಿಗೆ ತಡೆಯುತ್ತಿತ್ತು. ಇಂದಿನ ಚೊಕ್ಕ ವಸ್ತು ಇದೇ ಪ್ರಭಾವವನ್ನು ಎಂಟು ಕೋಟಿಯಷ್ಟು ಸಾರವಿಳಿಸಿದರೂ ತೋರುವುದು. ಅಲ್ಲದೆ, ಇದು ಕೆಲವು ಏಕಾಣುಜೀವಿಗಳನ್ನೂ ಕೊಲ್ಲುತ್ತದೆ. ರೋಗಾಣುಗಳು ಚುರುಕಾಗಿ ಬೆಳೆಯುತ್ತ ಭಾಗಗಳಾಗುತ್ತಿರುವಾಗ ಇದರ ಪ್ರಭಾವ ವಿಪರೀತ. ಈ ಪ್ರಭಾವದ ನಿಜ ಕಾರಣ ಗೊತ್ತಿರದಿದ್ದರೂ ಬೆಳೆಯುವ ರೋಗಾಣುವಿನ ಕೋಶಭಿತ್ತಿಗೆ ಅಗತ್ಯವಾದ ಕಿಣ್ವವೊಂದರ ವಿರೋಧ ಇರಬಹುದು. ಇದಕ್ಕೆ ಜಗ್ಗುವ ಏಕಾಣುಜೀವಿಗಳಿಂದಾದ ಎಲ್ಲ ರೋಗಗಳ ಚಿಕಿತ್ಸೆಗಳಲ್ಲಿಯೂ ಪೆನಿಸಿಲಿನ್ ಉಪಯುಕ್ತ. ಮಿದುಳು ಬೆನ್ನುಹುರಿಯ ದ್ರವವೊಂದನ್ನು ಬಿಟ್ಟರೆ ಮೈಯಲ್ಲೆಲ್ಲೆಲ್ಲೂ ಇದು ಕರಗಿ ಸುಲಭವಾಗಿ ಹರಡಿಕೊಳ್ಳುವುದರಿಂದ ಚುಚ್ಚಿ ಹೋಗಿಸಿದಾಗ ಬೇಗನೆ ರಕ್ತದಲ್ಲಿ ಕಾಣಿಸಿಕೊಳ್ಳುತ್ತದೆ. ಅಷ್ಟೇ ಬೇಗನೆ ಮೂತ್ರದಲ್ಲಿ ಹೊರಬೀಳುತ್ತದೆ. ಇದು ರಕ್ತದಲ್ಲಿ ಸಾಕಷ್ಟಿರಬೇಕಾದರೆ 2-3 ಗಂಟೆಗಳಿಗೊಂದಾವರ್ತಿ ದಿನ ರಾತ್ರಿ ಕೊಡಬೇಕಾಗಿತ್ತು. ಇದನ್ನು ತಪ್ಪಿಸಲು ಈಗ ಪ್ರೊಕೇನ್-ಪೆನಿಸಿಲಿನ್ ಸಂಯುಕ್ತವಿದೆ. ಇದು ನಿಧಾನವಾಗಿ ವಿಲೀನಿಸುವುದರಿಂದ ದಿನಕ್ಕೊಂದು ಬಾರಿ ಕೊಡುವುದು ಸಾಕು. ಕುರು, ಅಳ್ಳೆಪೊರೆ, ಬೆನ್ನುಹುರಿಯ ಕೋಶಗಳಲ್ಲಿಯೂ ಇದನ್ನು ಸ್ಥಳೀಯ ಪರಿಣಾಮಕ್ಕಾಗಿ ಹಾಕಬಹುದು. ಮುಲಾಮು, ತಣ್ಗೆನೆ, ಉದುರಿಸುವ ಹುಡಿಗಳಾಗಿ ಪೆನಿಸಿಲಿನ್ನನ್ನು ಬಳಸುವುದರಿಂದ ಇದರೆದುರು ಅತಿ ಸಂವೇದನಾಶೀಲವಾಗುವ ಅಪಾಯವಿದೆ. ರೋಗ ನಿರೋಧಕ್ಕಾಗಿ ಶಸ್ತ್ರಕ್ರಿಯಾ ನಂತರವೂ ಅಪಘಾತ ನಂತರವೂ ಕೊಡುವುದುಂಟು. ಇದರ ಅಗಾಧ ಪರಿಣಾಮ ಮೇಹ ರೋಗಗಳ ಚಿಕಿತ್ಸೆಯಲ್ಲಿದೆ ಉಪದಂಶ ಕೂಡ ಎಂಟು ಹತ್ತು ದಿವಸಗಳಲ್ಲಿ ಗುಣವಾಗುವುದು. ಹತ್ತು ಲಕ್ಷ ಏಕಮಾನ ಪೆನಿಸಿಲಿನ್ 0.6 ಗ್ರಾಂ ತೂಗುತ್ತದೆ.

ಬೀಟಾ ಲ್ಯಾಕ್ಟಾಂ ಉಂಗುರ ಹೊಂದಿದ ಪೆನಿಸಿಲಿನ್ ಹೊಸರೂಪಗಳು ಈಗ ಬಳಕೆಗೆ ಬಂದಿವೆ. ಅವುಗಳಲ್ಲಿ ಮುಖ್ಯವಾದವು ಪೆನಿಸಿಲಿನೇಸ್ ಪ್ರತಿರೋಧಿಸುವ ಪೆನಿಸಿಲಿನ್‍ಗಳು, ಅಮೈನೊಪೆನಿಸಿಲಿನ್‍ಗಳು (ಆಂಪಿಸಿಲಿನ್, ಅಮಾಕ್ಸ್ ಪೆನಿಸಿಲಿನ್), ಕಾರ್ಬಾಕ್ಸಿ ಮತ್ತು ಯುರಿಡೊಪೆನಿಸಿಲಿನ್‍ಗಳು (ಟೈಕಾಸಿಲಿನ್, ಪಿಪರಾಸಿಲಿನ್), ಸಿಫಲೊಸ್ಟೊರಿನ್‍ಗಳು (ಮೊದಲಿನದರಿಂದ ನಾಲ್ಕನೆ ಪೀಳಿಗೆ ಸಂಯುಕ್ತಗಳು), ಮಾನೇಬ್ಯಾಕ್ಟಂ (ಅಜ್‍ಟ್ರಯೊನಾಂ), ಕಾರ್ಬಾಪೆನಂಗಳು ( ಇಮಿಪೆನಮ್, ಮೀರೊಪೆನಮ್) ಮತ್ತು ಬೀಟಾ ಲಾಕ್ಟಾಮೇಸ್ ನಿರೋಧಕಗಳು (ಕ್ಲಾವುಲ್ಯಾನಿಕ್ ಆಮ್ಲ). ಈ ಬಗೆಯ ಪೆನಿಸಿಲಿನ್‍ಗಳು ಮೂಲ ಪೆನಿಸಿಲಿನ್‍ಗಿಂತ ಹೆಚ್ಚಿನ ಕಾರ್ಯಶಕ್ತಿಯನ್ನು ಹೊಂದಿವೆ.	
(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ